ಕುಡುಗತ್ತಿ ಮೀನು

ಟ್ರೈಕಿಯುರಿಡೆ ಕುಟುಂಬಕ್ಕೆ ಸೇರಿದ ಟ್ರೈಕಿಯುರಸ್ ಲೆಪ್ಟ್ಯೂರಸ್ ಎಂಬ ವೈಜ್ಞಾನಿಕ ಹೆಸರಿನ ಮೀನು (ಕಟ್‍ಲ್ಯಾಸ್ ಫಿಷ್, ಹೇರ್ ಟೈಲ್ಸ್). ಈ ಕುಟುಂಬದಲ್ಲಿ ಸುಮಾರು 22 ಪ್ರಭೇದಗಳಿವೆ. ಉಷ್ಣವಲಯದ ಸಮುದ್ರಗಳ ನಿವಾಸಿ ಇದು. ರಿಬ್ಬನ್ ಮೀನೆಂಬ ಹೆಸರೂ ಇದೆ. ಸುಮಾರು 5 ಅಡಿ ಉದ್ದ ಬೆಳೆಯುತ್ತದೆ. ಇದರ ದೇಹ ಪಟ್ಟಿಯಂತೆ ಇದೆ. ಬಾಲದ ರೆಕ್ಕೆ ಇಲ್ಲ. ದೇಹದುದ್ದಕ್ಕೂ ಹರಡಿರುವ ಬೆನ್ನಿನ ರೆಕ್ಕೆಯೊಂದುಂಟು. ಬಾಯಲ್ಲಿ ಕೋರೆಹಲ್ಲುಗಳಿವೆ. ಭಾರತದ ನೆರೆಹೊರೆಯಲ್ಲಿ ಈ ಪ್ರಭೇದವೂ ಇದನ್ನು ಹೋಲುವ ಇನ್ನಿತರ ಮೂರು ಪ್ರಭೇದಗಳೂ ಕಾಣಬರುತ್ತವೆ. ಭಾರತದ ಪೂರ್ವ ಕರಾವಳಿಯಲ್ಲಿ ಇವುಗಳ ಮೀನುಗಾರಿಕೆ ಪ್ರಮುಖವಾಗಿದೆ. 2003 ರಲ್ಲಿ 1,11,479 ಮೆಟ್ರಿಕ್ ಟನ್ ಮೀನುಗಳನ್ನು ಹಿಡಿಯಲಾಗಿತ್ತು. 

    

 (ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ